ಕಾಂತ ಏಕದ್ರುವಗಳು

 ವಿದ್ಯುತ್ತಿಗೆ ಸಮಾನ ಸ್ಥಾನದಲ್ಲಿ ಕಾಂತತ್ವವನ್ನು ಸಹ ಸ್ಥಾಪಿಸಲು ಊಹಿಸಿಕೊಂಡಿರುವ ಕಣಗಳೇ ಕಾಂತ ಏಕಧ್ರುವಗಳು (ಮ್ಯಾಗ್ನೆಟಿಕ್ ಮೋನೊಪೋಲ್ಸ್). ಕಾಂತೀಯ ಆವೇಶ ಒಯ್ಯುತ್ತಿರುವ ಒಂದು ಉಹಾತ್ಮಕ ಕಣ. ಆವಿಷ್ಟ ಕಣವೊಂದು ವಿದ್ಯುತ್‍ಕ್ಷೇತ್ರಕ್ಕೆ ಆಕರವಾಗಿರುವಂತೆಯೇ ಇದು ಕಾಂತ ಕ್ಷೇತ್ರಕ್ಕೆ ಆಕರವಾಗಿರುವುದು. ವಿದ್ಯುದಂಶವೊಂದು ವಿದ್ಯುತ್ ಕ್ಷೇತ್ರಕ್ಕೆ ಆಕರವಾಗುತ್ತದೆ ಮತ್ತು ಚಲಿಸುವಾಗ ಅದು ಕಾಂತಕ್ಷೇತ್ರವನ್ನು ಸೃಷ್ಟಿಸುತ್ತದೆ. ಸಮಾಂಗತ್ವಕ್ಕೋಸ್ಕರ (ಸಿಮೆಟ್ರಿ) ಸ್ಥಾಯೀ ಸ್ಥಿತಿಯಲ್ಲಿರುವಾಗ ಕಾಂತಕ್ಷೇತ್ರದ ಆಕರವಾಗುವ ಮತ್ತು ಚಲಿಸುವಾಗ ವಿದ್ಯುತ್ ಕ್ಷೇತ್ರವನ್ನು ಸೃಷ್ಟಿಸುವ ಕಾಂತಾಂಶ ಇರಬೇಕೆಂದು ಊಹಿಸುವುದು ಸ್ವಾಭಾವಿಕ. ಕಾಂತಾಂಶದ ಇರುವಿಕೆಯನ್ನು ಅಭಿಜಾತ (ಕ್ಲಾಸಿಕಲ್) ಭೌತವಿಜ್ಞಾನ ಅಲ್ಲಗಳೆದಿಲ್ಲ. ಡಿರ್ಯಾಕ್ ಎಂಬಾತ ಶಕಲಶಾಸ್ತ್ರದ ನಿಯಮಗಳೇನಾದರೂ ಕಾಂತಾಂಶದ ಇರುವಿಕೆಯನ್ನು ಅಲ್ಲಗಳೆಯುತ್ತವೆಯೇ ಎಂಬುದನ್ನು ಪರಿಶೀಲಿಸಿದ (1931). ಅಂಥದೇನೂ ಕಾಣಲಿಲ್ಲ.  ಹೀಗಿದ್ದರೂ ಆತ ಕಾಂತ ಏಕಧ್ರುವಗಳ ಬಗ್ಗೆ ನಡೆಸಿದ ಗಣಿತೀಯ ಸಂಶೋಧನೆಗಳಿಂದ ಅವುಗಳ ಗುಣಗಳ ವಿಚಾರವಾಗಿ ಕೆಲವು ಕುತೂಹಲ ಕಾರಿಯಾದ ಸಂಗತಿಗಳು ತಿಳಿದುಬಂದಿವೆ:

 1 ಕಾಂತ ಏಕಧ್ರುವಗಳಿದ್ದರೆ ವಿದ್ಯುದಂಶದಂತೆ ಅವುಗಳೂ  ಎಂಬ ಸೂತ್ರವನ್ನು ಪಾಲಿಸುತ್ತವೆ. ಇಲ್ಲಿ  ಪೂರ್ಣಾಂಕ,  ಕಾಂತ ಧ್ರುವತ್ರಾಣದ ಶಕಲ. ಇದು ವಿದ್ಯುದಂಶದ ಶಕಲಕ್ಕಿಂತ 68.5 ರಷ್ಟು ಹೆಚ್ಚಾಗಿರುತ್ತದೆ. ಅಂದರೆ ಎರಡು ವಿದ್ಯುತ್ ಶಕಲಗಳ ನಡುವೆ ವರ್ತಿಸುವ ಬಲಕ್ಕಿಂತ ಅಷ್ಟೇ ಅಂತರದಲ್ಲಿ ಇರಿಸಿರುವ ಎರಡು ಕಾಂತಶಕಲಗಳ ನಡುವೆ ವರ್ತಿಸುವ ಬಲ 4,692 ರಷ್ಟು.

 2 ಕಾಂತ ಏಕಧ್ರುವದ ಜಡಾಂಶ ಪ್ರೋಟಾನಿನ ಜಡಾಂಶಕ್ಕಿಂತ ಮೂರರಷ್ಟು ಹೆಚ್ಚು.

 3 ಕಾಂತಧ್ರುವಗಳು ಜೊತೆಯಾಗಿ ಸೃಷ್ಟಿಯಾಗುತ್ತವೆ ಮತ್ತು ಜೊತೆಯಾಗಿ ಲಯವಾಗುತ್ತವೆ.

 4 ಕಾಂತ ಏಕಧ್ರುವಗಳು ಎಲೆಕ್ಟ್ರಾನುಗಳಂತೆ ಫೋಟಾನುಗಳನ್ನು ಹೀರಿಕೊಳ್ಳುತ್ತವೆ ಮತ್ತು ಹೊರಸೂಸುತ್ತವೆ. ಒಂದು ಫ್ರೋಟಾನುವಿನೊಂದಿಗೋ ನ್ಯೂಕ್ಲಿಯಸಿನೊಂದಿಗೋ ಡಿಕ್ಕಿ ಹೊಡೆಯುವಾಗ ಕಾಂತ ಏಕಧ್ರುವಗಳು ಸೃಷ್ಟಿಯಾಗಬಹುದು.  

 

ಚಿತ್ರ-1

 

ಇದರಿಂದ ವಿಶ್ವಕಿರಣಗಳಲ್ಲಿ ಕಾಂತ ಏಕಧ್ರುವಗಳನ್ನು ಪತ್ತೆಹಚ್ಚಬಹುದೆಂಬ ನಂಬಿಕೆಯಿದೆ. ಇವು ಉಲ್ಕೆಗಳಲ್ಲೂ ಕಬ್ಬಿಣದ ಅದುರಿನಲ್ಲೂ ಹೂತುಕೊಂಡಿರಬಹುದು. ಇವನ್ನು ಕಾಂತಕ್ಷೇತ್ರದ ಪ್ರಭಾವದಿಂದ ಹೊರಕ್ಕೆಳೆಯುವುದು ಸುಲಭ.

 5 ಕಾಂತಕ್ಷೇತ್ರದಲ್ಲಿ ಇವು ವೇಗೋತ್ಕರ್ಷಗೊಳ್ಳುತ್ತವೆ. ಬ್ರಹ್ಮಾಂಡದಲ್ಲಿರುವ ಕಾಂತಕ್ಷೇತ್ರದಲ್ಲಿ ವೇಗೋತ್ಕರ್ಷಗೊಳ್ಳುವ ಈ ಕಣಗಳ ಶಕ್ತಿ ನೂರು ಬಿಲಿಯನ್ ಬಿಲಿಯನ್ ಎಲೆಕ್ಟ್ರಾನ್ ವೋಲ್ಟುಗಳಿಗೆ ಮಿಕ್ಕಿರುತ್ತದೆ.

 6 ಇವು ಅನಿಲ, ದ್ರವ, ಮತ್ತು ಘನ ಮಾಧ್ಯಮಗಳಲ್ಲಿ ಹಾಯುವಾಗ ತೀವ್ರವಾಗಿ ಅಯಾನೀಕರಣವನ್ನುಂಟುಮಾಡುತ್ತವೆ. ಆದ್ದರಿಂದ ಫೋಟೋಗ್ರಫಿ ತಟ್ಟೆಗಳಲ್ಲಿ ಮತ್ತು ಗುಳ್ಳೆ ಮಂದಿರಗಳಲ್ಲಿ ಇವುಗಳ ಜಾಡನ್ನು ಕಾಣಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸುತ್ತಾರೆ.

 ಕಾಂತ ಏಕಧ್ರುವಗಳು ಇನ್ನೂ ಊಹಾಕರಣಗಳಾಗಿಯೆ ಉಳಿದಿವೆ. ಸೈದ್ಧಾಂತಿಕವಾಗಿ ಇವು ಇರಬೇಕಾಗಿಲ್ಲವೆಂಬ ಸುಳಿವೇನೂ ಸಿಕ್ಕಿಲ್ಲ. ಆದ್ದರಿಂದ ಇವುಗಳ ಅನ್ವೇಷಣೆ ನಡೆಯುತ್ತಲೆ ಹೋಗುತ್ತದೆ.

                                                                               (ಎಸ್.ಎ.ಎಚ್.)

          (ಪರಿಷ್ಕರಣೆ: ಹೆಚ್.ಆರ್.ಆರ್)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ